ನಮ್ಮ ಸಮಾಜದ ಹಿರಿಯರ ದೂರದೃಷ್ಟಿ, ಔದಾರ್ಯ ಮತ್ತು ಕಾರ್ಯದಕ್ಷತೆಯ ಫಲವಾಗಿ ಸರಿಸುಮಾರು ೫೧ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ೩೧ ಮಂದಿ ಹಿರಿಯರು ಸೇರಿ ಸಂಘವನ್ನು ಸ್ಥಾಪಿಸುವ ತೀರ್ಮಾನವನ್ನು ತೆಗೆದುಕೊಂಡರು. ಬೆಂಗಳೂರಿನ ‘BUNTS SANGHA’ ದಿನಾಂಕ ಸೆಪ್ಟೆಂಬರ್ ೨೦, ೧೯೭೩ರಂದು ಮೈಸೂರು ಸೊಸೈಟಿ ರಿಜಿಸ್ಟ್ರೇಶನ್ ಕಾಯ್ದೆ ಪ್ರಕಾರ ನೋಂದಾಯಿಸಲ್ಪಟ್ಟಿತು. ಬಂಟರ ಸಂಘ ಬೆಂಗಳೂರಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ವಿಷಯ ದಿವಂಗತ ರಾಧಾಬಾಯಿ ತಿಮ್ಮಪ್ಪ ಭಂಡಾರಿ ದಂಪತಿಗಳು ಸಂಘಕ್ಕೆ ದಾನವಾಗಿ ನೀಡಿರುವ ೨ ಎಕರೆ ೩೯ ಗುಂಟೆ ಜಾಗ.
ವಿಜಯನಗರದ ಕೇಂದ್ರದಲ್ಲಿರುವ ಈ ಜಾಗವನ್ನು ದಿವಂಗತ ರಾಧಾಬಾಯಿ ತಿಮ್ಮಪ್ಪ ಭಂಡಾರಿ ದಂಪತಿಗಳ ಪರವಾಗಿ ಸುಪುತ್ರ ಬೆರ್ಮು ಟಿ. ಭಂಡಾರಿಯವರು ದಿನಾಂಕ ೨೯.೦೩.೧೯೭೫ರಂದು ಅಂದಿನ ಸಂಘದ ಅಧ್ಯಕ್ಷರಾದ ಇರ್ಮಾಡಿ ಆನಂದ ಶೆಟ್ಟಿಯವರಿಗೆ ದಾನಪತ್ರದ ಮುಖಾಂತರ ನೀಡಿದರು.
ಸಂಘ ಪ್ರಾರಂಭವಾಗಿ ಸುಮಾರು ೨೦ ವರ್ಷಗಳವರೆಗೆ ಸಂಘಕ್ಕೆ ತನ್ನದೇ ಆದ ಕಚೇರಿ ಇರಲಿಲ್ಲ. ಆದರೆ ಪ್ರತೀ ವರ್ಷ ಮಹಾಸಭೆ ಮತ್ತು ಸಂತೋಷಕೂಟ ನಡೆಯುತಿತ್ತು. ೧೯೫೮ರಲ್ಲಿ ೩೧ ಸದಸ್ಯರಿಂದ ಪ್ರಾರಂಭಗೊಂಡ ಸಂಘ ೧೯೮೪ರಲ್ಲಿ ಸದಸ್ಯರ ಸಂಖ್ಯೆ ೮೨೩ ಕ್ಕೆ ಮುಟ್ಟಿ, ಅಂದಿನಿಂದ ಸದಸ್ಯರ ಕೈಪಿಡಿ ಎರಡು-ಮೂರು ವರ್ಷಕ್ಕೊಮ್ಮೆ ಮುದ್ರಿಸಲ್ಪಡುತ್ತಿದ್ದು, ೨೦೦೯ರ ಮಹಾಸಭೆಯ ವರದಿಯಂತೆ ೭೧೭೫ ಸದಸ್ಯರು ಸಂಘದಲ್ಲಿದ್ದಾರೆ.ದಿವಂಗತ ರಾಧಾಬಾಯಿ ತಿಮ್ಮಪ್ಪ ಭಂಡಾರಿಯವರ ಆಶಯದಂತೆ ಅವರು ದಾನವಾಗಿ ನೀಡಿರುವ ಜಾಗದಲ್ಲಿ ಸುಸಜ್ಜಿತವಾದ ಸಭಾಭವನ, ೧೯೯೩ ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಶ್ರೀ ಎಂ. ವೀರಪ್ಪ ಮೊಯ್ಲಿಯವರಿಂದ ಉದ್ಘಾಟಿಸಲ್ಪಟ್ಟಿತು.
ಪ್ರಸಕ್ತ ನವೀಕ್ರೃತಗೊಂಡಿರುವ ಹವಾನಿಯಂತ್ರಿತ ಸಭಾಭವನ ಬೆಂಗಳೂರಿನಲ್ಲಿಯೇ ವರ್ಷಕ್ಕೆ ೨೦೦ಕ್ಕೂ ಮಿಕ್ಕಿದ ದಿನಗಳು ಉಪಯೋಗಿಸುವ ಏಕೈಕ ಸಭಾಭವನವಾಗಿದೆ. ಇಲ್ಲಿರುವ ವಿಶಾಲವಾದ ವಾಹನ ನಿಲುಗಡೆ ವ್ಯವಸ್ಥೆ, ಅತ್ಯಾದುನಿಕ ಅರೋಗ್ಯಪೂರ್ಣ ಭೋಜನಶಾಲೆ, ಸುಮಾರು ೧೨೫೦ ಆರಾಮದಾಯಕ ಆಸನ ವ್ಯವಸ್ಥೆ ಹಾಗೂ ಪರಿಸರದ ಶುಭ್ರತೆ ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿದೆ. ಆರಂಭದಲ್ಲಿ ‘ವೈದ್ಯಕೀಯ ಕೇಂದ್ರ’ವನ್ನು ಪ್ರಾರಂಭಿಸಲು ಉದ್ದೇಶಿಸಿದ್ದ ಜಾಗ ತದನಂತರ ಮಹಿಳಾ ವಸತಿನಿಲಯವಾಗಿ ಪರಿವರ್ತಿತಗೊಂಡಿತು. ಪ್ರಸ್ತುತ ಸಂಘದ ಸಭಾಂಗಣವಿರುವ ಜಾಗದಲ್ಲಿ ನಡೆದ ಮೊದಲ ಕಾರ್ಯಕ್ರಮ ದೀಪಾವಳಿ ಆಚರಣೆ.
೧೯೮೮ರಿಂದ ಸಂಘದ ಸಾರಥ್ಯವನ್ನು ಶ್ರೀ ಕೆ. ಶ್ರೀನಿವಾಸ್ ಆಳ್ವರವರು ವಹಿಸಿ, ತಮ್ಮ ವಿರಾಮದ ಸಮಯವನ್ನು ಸಂಘಕ್ಕಾಗಿ ಉಪಯೋಗಿಸಿ, ಸಂಘದ ಸದಸ್ಯರನ್ನು ಕ್ರಿಯಾಶೀಲರಾಗಿಸಿ, ಇತರ ಪದಾಧಿಕಾರಿಗಳೊಂದಿಗೆ ಮನೆಮನೆಗಳಿಗೆ ತೆರಳಿ, ಸದಸ್ಯರ ಮನಗಳನ್ನು ತಟ್ಟಿ ಅವರ ಭಾವನೆಗಳಿಗೆ ಸ್ಪಂದಿಸಿ, ಸಂಘದ ಕೀರ್ತಿಯನ್ನು ಪಸರಿಸಿದರು. ಇವರ ಅಧಿಕಾರದ ಅವಧಿಯಲ್ಲಿ ಹಲವಾರು ಹೊಸಕಾರ್ಯಕ್ರಮಗಳು, ಮಹಿಳಾ ವಿಭಾಗ, ಯುವವಿಭಾಗ ಮೊದಲಾದ ಸಮಿತಿಗಳು ರೂಪುಗೊಂಡವು. ಸಾಧಾರಣವಾಗಿ ಈ ಹಿಂದೆ ಬಂಟ ಸಮಾಜದ ಶ್ರೀಮಂತ ಜನರು ಮಾತ್ರ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು, ಆದರೆ ಆಳ್ವರವರು ತಮ್ಮ ಅಧಿಕಾರಾವಧಿಯಲ್ಲಿ ಸಾಧ್ಯವಾದಷ್ಟು ಸಾಮಾನ್ಯ ಜನರನ್ನು ಸಂಪರ್ಕಿಸಿ, ಸಂಘದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ವ್ಯಕ್ತವಾಗುವಂತೆ ನೋಡಿಕೊಂಡರು. ಇವರ ಅವಧಿಯಲ್ಲಿ ‘ಸ್ನೇಹ ಸಂದೇಶ’ ಪತ್ರಿಕೆ ಪ್ರಾರಂಭವಾಯಿತು.
ಶ್ರೀ ಡಾ. ಎಂ. ಟಿ. ರೈಯವರ ಅಧ್ಯಕ್ಷೀಯ ಅವಧಿಯಲ್ಲಿ ದಿನಾಂಕ ೧೯.೦೧.೨೦೦೦ ರಂದು ಶ್ರೀ ವರಸಿದ್ಧಿ ವಿನಾಯಕ ಮಂದಿರದ ಸ್ಥಾಪನೆಯಾಯಿತು.
ಶ್ರೀಮತಿ ಸುಶೀಲ ಪಿ. ಶೆಟ್ಟಿ ಅಧ್ಯಕ್ಷೆಯಾಗಿದ್ದ ೧೯೯೯-೨೦೦೧ರ ಅವಧಿಯಲ್ಲಿ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ಸಮಾವೇಶ “ಮಿಲೇನಿಯಂ ಸ್ತ್ರೀ -೨೦೦೦” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀ ರಮಾನಾಥ ರೈಯವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಮಹಿಳೆಯರು ಸಮಾವೇಶದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
೧೫.೦೬.೨೦೦೨ ರಂದು ಶಾಲಾ ಕಟ್ಟಡದ ಉದ್ಘಾಟನೆಯನ್ನು ಅಂದಿನ ಕೇಂದ್ರ ಮಂತ್ರಿಗಳಾದ ಶ್ರೀ ಧನಂಜಯಕುಮಾರ್ ಮಾಡಿದ್ದರು.
೨೦೦೧-೨೦೦೪ರ ವರೆಗೆ ಶ್ರೀ ಐ.ಎಂ. ಜಯರಾಮ್ ಶೆಟ್ಟಿಯವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಲವಾರು ಕಾರ್ಯಕ್ರಮಗಳು ಜರುಗಿದವು. ೦೫.೦೩.೨೦೦೨ ರಂದು ಶಾಲಾ ಕಟ್ಟಡದ ಗುದ್ದಲಿ ಪೂಜೆಯನ್ನು ಶ್ರೀ ಆರ್.ಎನ್.ಶೆಟ್ಟಿಯವರು ನೆರವೇರಿಸಿದರು. ೧೫.೦೬.೨೦೦೨ ರಂದು ಶಾಲಾ ಕಟ್ಟಡದ ಉದ್ಘಾಟನೆಯನ್ನು ಅಂದಿನ ಕೇಂದ್ರ ಮಂತ್ರಿಗಳಾದ ಶ್ರೀ ಧನಂಜಯಕುಮಾರ್ ಮಾಡಿದ್ದರು. ಸ್ಥಳೀಯ ಶಾಸಕರಾದ ಶ್ರೀ ಸೋಮಣ್ಣ, ಕಿರುಗಾವಲು ಕ್ಷೇತ್ರದ ಶಾಸಕ ಶ್ರೀ ತಮ್ಮಣ್ಣ, ಲೋಕಸಭಾ ಸದಸ್ಯರಾದ ಶ್ರೀ ಅಂಬರೀಷ್, ಶ್ರೀ ಆರ್.ಎನ್.ಶೆಟ್ಟಿ. ಶ್ರೀ ಬಿ.ಆರ್. ಶೆಟ್ಟಿ ಉಪಸ್ಥಿತರಿದ್ದು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಆಶೀರ್ವದಿಸಿದರು. ೧೫.೦೬.೨೦೦೨ ರಂದು ಮಹಿಳಾ ವಸತಿಗ್ರಹದ ಉದ್ಘಾಟನೆಯನ್ನು ನೆರವೇರಿಸಲಾಯಿತು.
೧೫.೦೮.೨೦೦೨ ರಂದು ಸ್ವಾತಂತ್ರೋತ್ಸವದಲ್ಲಿ ಕರ್ನಾಟಕ ಸರಕಾರದ ಸಚಿವರಾದ ರಾಮಲಿಂಗ ರೆಡ್ಡಿಯವರು ಮುಖ್ಯ ಅತಿಥಿ ಭಾಗವಹಿಸಿದ್ದರು. ಗುರುಕಿರಣ್ ರವರಿಂದ “ಶಿಕ್ಷಣ ಕ್ರಾಂತಿ”ಯ ಸಹಾಯಾರ್ಥ ಪ್ರದರ್ಶನ ನಡೆಯಿತು. ಶಿಕ್ಷಣಕ್ರಾಂತಿಯ ಮೂಲಕ ಸುಮಾರು ೫೦೦೦ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ೧೩ ಲಕ್ಷ ರೂಗಳ ಸಹಾಯಧನದ ಮೂಲಕ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗುತ್ತಿರುವ ಸಮಾಜದ ಬಹುತೇಕ ವಿದ್ಯಾರ್ಥಿಗಳಿಗೆ ನೆರವು ನೀಡಿ ಅವರ ವಿಧ್ಯಾಭ್ಯಾಸ ಮುಂದುವರಿಯುವಂತೆ ಸಹಕರಿಸಲಾಯಿತು.
ಶ್ರೀ ಹರೀಶ್ ಕುಮಾರ್ ಶೆಟ್ಟಿಯವರ ೨೦೦೬-೨೦೦೮ರ ಅಧ್ಯಕ್ಷೀಯ ಅವಧಿಯಲ್ಲಿ ದಿನಾಂಕ ೧೫.೦೭.೨೦೦೭ ರಂದು ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮವನ್ನು ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ. ಕುಮಾರಸ್ವಾಮಿಯವರು ನೆರವೇರಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಂ. ವೀರಪ್ಪ ಮೊಯ್ಲಿ, ಕರ್ನಾಟಕ ಸರಕಾರದ ಸಚಿವರಾದ ಶ್ರೀ ನಾಗರಾಜ ಶೆಟ್ಟಿಯವರು ಪಾಲ್ಗೊಂಡಿದ್ದರು.
ಸುವರ್ಣ ಸಂಭ್ರಮಾಚಾರಣೆಯ ಪ್ರಯುಕ್ತ ಸುವರ್ಣ ಸಂಗಮ, ಸುವರ್ಣ ಪಾಕ, ವೈದ್ಯಕೀಯ ಶಿಬಿರ, ವಧು-ವರರ ಸಮಾವೇಶ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳು ವರ್ಷದುದ್ದಕ್ಕೂ ಜರುಗಿದವು.೦೭/೦೮.೦೬.೨೦೦೮ ರಂದು ರಂದು ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭವು ಅದ್ದೂರಿಯಾಗಿ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಿತು.
ಪ್ರಸ್ತುತ ಡಾ. ಆರ್. ಎನ್. ಶೆಟ್ಟಿಯವರು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದು, ಶ್ರೀ ದೇವರಾಜ್ ಅರಸು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಚಂದ್ರಶೇಖರ್ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳು ಹಾಗೂ ಪ್ರಸ್ತುತ ‘International Federation of Engineering Education Societies’ನ ಉಪಾಧ್ಯಕ್ಷರಾದ ಡಾ. ಎನ್. ಆರ್. ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಆಳ್ವ ಹಾಗೂ ಸಂಘದ ಅಧ್ಯಕ್ಷರು, ಗೌ|ಕಾರ್ಯದರ್ಶಿಗಳು ಮತ್ತು ಖಜಾಂಚಿಯವರು ಸದಸ್ಯರಾಗಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ಸುಮಾರು ೨೫೦೦ ಮಕ್ಕಳು ಓದುತ್ತಿದ್ದು, ಸುತ್ತಮುತ್ತಲಿನ ಪರಿಸರದಲ್ಲಿ ಉತ್ತಮ ಖ್ಯಾತಿಯನ್ನು ಪಡೆದಿದ್ದು, ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿದೆ.
೧೯೯೩ ರಲ್ಲಿ ೪೪,೦೦೦ ರೂ.ಗಳಿಂದ ಪ್ರಾರಂಭವಾದ ವಿದ್ಯಾರ್ಥಿವೇತನ ಇಂದಿನ ದಿನಗಳಲ್ಲಿ ಪ್ರತಿ ವರ್ಷ ೨೦ ಲಕ್ಷಕ್ಕಿಂತ ಮಿಕ್ಕಿದ ಹಣವನ್ನು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ೧೯೯೩ರಿಂದ ಇದುವರೆಗೆ ಸುಮಾರು ೭೫ ಲಕ್ಷ ರೂ.ಗಳನ್ನು ವಿದ್ಯಾರ್ಥಿವೇತನವಾಗಿ ನೀಡಿದೆ. ಇದರ ಪ್ರಯೋಜನವನ್ನು ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೇರಿದ ನಂತರ ತಾವು ಪಡೆದ ಹಣವನ್ನು ಹಿಂತಿರುಗಿಸಿ ತಮ್ಮಂತೆಯೇ ಇತರರಿಗೂ ನೆರವಾಗಲಿ ಎನ್ನುವ ಮಹದಾಸೆ ಹೊಂದಿರುವುದು ಪ್ರಶಂಸನೀಯ.
ಸಂಘವು ಪ್ರತೀ ವರ್ಷವೂ ಸಮಾಜದ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುವಿಕೆ, ಕರಿಮಣಿ ಸಹಾಯ, ಆಪತ್ಕಾಲದ ನೆರವು, ಮೊದಲಾದ ಸಮಾಜಸೇವೆಯನ್ನು ಮಾಡುತ್ತಿದೆ. ಸಂಘವು ಇನ್ನಿತರ ಸಮಿತಿಗಳಾದ ಸಮಾಜಸೇವೆ, ಮಹಿಳಾವಿಭಾಗ, ಸಾಂಸ್ಕೃತಿಕ ಸಮಿತಿ, ಖರೀದಿ ಸಮಿತಿ, ಆತಿತ್ಯ ಮತ್ತು ಊಟೋಪಚಾರ ಸಮಿತಿ, ಯಕ್ಷಗಾನ ತರಬೇತಿ, ವಿವಾಹ ವೇದಿಕೆ, ಯುವ ವಿಭಾಗ, ಪ್ರಾರ್ಥನಾ ಮಂದಿರ ಸಮಿತಿ, ಉದ್ಯೋಗ ಮಾಹಿತಿ, ಸಂಕೀರ್ಣ ನಿರ್ವಹಣೆ, ವೈದ್ಯಕೀಯ ವಿಭಾಗ, ಕ್ರೀಡಾ ಸಮಿತಿ, ವಿದ್ಯಾರ್ಥಿವೇತನ ಸಮಿತಿ, ಕಾನೂನು ವಿಭಾಗ, ಸಾಹಿತ್ಯ ಮತ್ತು ಪ್ರಕಟಣಾ ವಿಭಾಗ, ಭೂ ಖರೀದಿ, ಸದಸ್ಯತ್ವ ಮತ್ತು ಕೈಪಿಡಿ ವಿಭಾಗಳ ಮೂಲಕ ತನ್ನ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ. ಬಂಟರ ಸಂಘವು ಇಂದು ವ್ಯಾಪಕವಾಗಿ ಬೆಳೆಯಲು ಕಾರಣೀಕರ್ತರಾದ ದಾನಿಗಳು ಮತ್ತು ಸಂಘಕ್ಕಾಗಿ ಅಹರ್ನಿಶಿ ದುಡಿದ ಎಲ್ಲಾ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸುತ್ತಿದ್ದೇವೆ. ೨೦೦೮-೧೦ ರ ಅವಧಿಗೆ ಹಿರಿಯರಾದ ಶ್ರೀ ಬಿ.ಎಲ್.ಎನ್. ಹೆಗ್ಡೆಯವರು ಅಧ್ಯಕ್ಷರಾಗಿ ಹಾಗೂ ಅವರ ನೇತ್ರತ್ವದ ಕಾರ್ಯಕಾರಿ ಸಮಿತಿ ಅವಿರೋಧವಾಗಿ ಆಯ್ಕೆಗೊಂಡಿರುವುದು ಸಂಘದ ಐತಿಹಾಸಿಕ ಬೆಳವಣಿಗೆ.
ಯುವ ವಿಭಾಗದ ವತಿಯಿಂದ ೨ ದಿನಗಳ ರಾಷ್ಟ್ರೀಯ ಯುವ ಬಂಟರ ಸಮಾವೇಶ “ಭಾವೈಕ್ಯ” ಕಾರ್ಯಕ್ರಮ ನಡೆಯಿತು.
ಸಂಘದಲ್ಲಿ ಸದಸ್ಯತ್ವದ ಬೇಡಿಕೆ ದಿನದಿಂದ ದಿನೇ ಹೆಚ್ಚುತ್ತಿರುವುದು ಒಂದೆಡೆಯಾದರೆ, ಸಂಘದ ಶಾಲೆಯಲ್ಲಿಯೂ ಕೂಡ ಇನ್ನಿಲ್ಲದ ಬೇಡಿಕೆ ತೀವ್ರಗತಿಯಲ್ಲಿ ಏರುತ್ತಿದ್ದು, ಅಗತ್ಯ ಸಂಪನ್ಮೂಲಗಳೊಂದಿಗೆ ಈ ಎಲ್ಲಾ ಬೇಡಿಕೆಗಳ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ದೂರದೃಷ್ಟಿಕೋನದ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯತೆ ಹಾಗೂ ಅನಿವಾರ್ಯತೆ ಸಂಘದ ಭವಿಷ್ಯದ ಆಡಳಿತ ಮಂಡಳಿಯ ಮುಂದಿದ್ದು ಸಮಾಜ ಬಾಂಧವರೆಲ್ಲರೂ ಕೂಡಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.