Sankalpa Scheme Application & Information- Bunts ' Sangha Bangalore, 29 Apr 2024, Bunts ' Sangha Bangalore | Membership application format, 31 Mar 2025, Bunts Sangha Membership
Kannada test

About Bunts (ನಾವು ಬಂಟರು)

ಬಂಟ ಸಮಾಜದ ಹಿನ್ನೆಲೆಯ ಬೇರಿನಾಳವನ್ನು ಅವಲೋಕಿಸ ಹೊರಟಾಗ ಬಗೆ-ಬಗೆ ರೀತಿಯ ದಾಖಲೆಗಳು ಇತಿಹಾಸದಲ್ಲಿ ಸಿಗುತ್ತವೆಯಾದರು ಕೂಡ ಬಂಟರ ಮೂಲಸ್ಥಾನದ ಬಗ್ಗೆ ಬಹಳಷ್ಟು ನಿಖರವಾದ ಮಾಹಿತಿಗಳಿಲ್ಲ. ಕ್ರಿ.ಶ. ಆರಂಭದ ಮೊದಲ ಶತಮಾನದ ಸಂದರ್ಭದಲ್ಲಿ ತುಳುವ ಪ್ರದೇಶದಲ್ಲಿ ಅಲೂಪರು, ಪಲ್ಲವರು ಹಾಗೂ ಬನವಾಸಿಯ ಕದಂಬರು ಸೇರಿದಂತೆ ಬಹಳಷ್ಟು ಮಂದಿ ಸ್ವತಂತ್ರ ಪಾಳೇಗಾರಿಕೆಯ ರಾಜರಿದ್ದರು. ಇವೆಲ್ಲ ಘಟನೆಗಳು ನಿರಂತರವಾದ ಹೋರಾಟದ ಹಂತಗಳಿಗೆ ಕಾರಣೀಕರ್ತರಾದ ಬಹುಮುಖ್ಯ ವರ್ಗದ ಜನ ಬಂಟರು ಅಥವಾ ವೀರಯೋಧ (warriors) ರು ಈ ಹಿಂದೆಯೇ ಇದ್ದರೆನ್ನುವುದಕ್ಕೆ ನಿದರ್ಶನ. ಸಂಸ್ಕೃತದ “ಭಟ” ಅಂದರೆ “ಪರಾಕ್ರಮಿ” “ವೀರಯೋಧ” ಎನ್ನುವ

ಶಬ್ಧದಿಂದ “ಬಂಟ” ಪದ ರೂಪುಗೊಂಡಿತು. ತುಳುವ ಪದ “ಬಂಟ” ಅಂದರೆ ರಕ್ಷಕ, ನಾಯಕ ಮತ್ತು ಶೆಟ್ರೆ ಹಾಗೂ ನಾಡವ ಎಂದರೆ ನಾಯಕತ್ವ, ಉದಾತ್ತ ವ್ಯಕ್ತಿತ್ವ ಮತ್ತು ಭೂ ಮಾಲೀಕ ಎಂದೆಲ್ಲ ಅರ್ಥ. ಕೃಷಿಕ ಹಾಗೂ ವೀರತ್ವದ ಮಿಶ್ರ ಪರಂಪರೆಯ ವಿಶೇಷ ಗುಣಗಳಿಂದಾಗಿ ತಮ್ಮ ನೆರೆಹೊರೆಯವರು ಸೇರಿದಂತೆ ರಾಜ್ಯದ ಇತರೇ ಭಾಗದ ಜನರಿಗಿಂತ ವಿಭಿನ್ನವಾಗಿ ಗುರುತಿಸಿಕೊಂಡವರು ಬಂಟರು.

ಸಾಮಾನ್ಯವಾಗಿ ಕರ್ನಾಟಕ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳದ ಕಾಸರಗೋಡು ತಾಲ್ಲೂಕಿನಲ್ಲಿ ಬಂಟರ ಮೂಲ ಕಂಡುಬಂದಿದ್ದು, ಆ ಪ್ರದೇಶ ಸಾಮಂತ ರಾಜರ ಆಳ್ವಿಕೆಯ ತುಳುನಾಡಾಗಿತ್ತು. ತುಳುವ ರಾಜ ವಂಶಸ್ಥರ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ವೈಭವದ ತುತ್ತ ತುದಿಗೇರಿತ್ತು. ರಾಜವಂಶಸ್ಥರ ಆಳ್ವಿಕೆಯ ಅಂತ್ಯದ ನಂತರ ಬಂಟರು ದೊಡ್ಡ ಪ್ರಮಾಣದಲ್ಲಿ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು


ಹಾಗೂ ತನ್ಮೂಲಕ ಭೂಮಾಲೀಕರಾಗಿ ಗುರುತಿಸಿಕೊಂಡವರು. ಸಾಮಾನ್ಯವಾಗಿ “ತುಳು” ತಮ್ಮ ಮಾತೃಭಾಷೆಯಾದರೂ ಬಹುಭಾಷಿಕರಾಗಿ ಪಾಂಡಿತ್ಯ ಸಾಧಿಸಿದವರು. ಪಯಸ್ವಿನಿ ನದಿಯಿಂದ ಉತ್ತರಕ್ಕೆ ಬಹುಸಂಖ್ಯಾತ ಬಂಟರ ಮಾತೃಭಾಷೆ ತುಳುವಾಗಿದ್ದು ಸಾಮಾನ್ಯವಾಗಿ ಕಾಸರಗೋಡಿನಿಂದ ಬ್ರಹ್ಮಾವರದ ತನಕ ಅದು ಚಾಲ್ತಿಯಲ್ಲಿದ್ದು, ಬ್ರಹ್ಮಾವರದಿಂದ ಉತ್ತರಕ್ಕೆ ಸಾಮನ್ಯವಾಗಿ “ಕುಂದಗನ್ನಡ” ಬಂಟರ ಮಾತೃಭಾಷೆಯಾಗಿದೆ.


ಸಂಪ್ರದಾಯಸ್ಥ ಹಿಂದುಗಳಾದ ಬಂಟರ ಮೂಲ ಆರಾಧ್ಯ ದೇವತೆ ಆದಿಶಕ್ತಿಯಾದರೂ ಕೂಡ ಶಿವ, ವಿಷ್ಣು ಸೇರಿದಂತೆ ಎಲ್ಲ ಹಿಂದು ದೇವತೆಗಳ ಆರಾಧಕರು.ಆರಂಭದಿಂದಲೂ ಕೂಡ ಬಂಟರು ಹಲವಾರು ದೈವ, ದೇವಸ್ಥಾನಗಳ ನಿರ್ಮಾತೃರು ಹಾಗೂ ಆಶ್ರಯದಾತರಾಗಿ ಭಕ್ತಿ ಮಾರ್ಗದ ಮೂಲಕವೇ ಮೋಕ್ಷ ಸಿದ್ಧಿಯ ತತ್ವದಲ್ಲಿ ಗಾಢವಾದ ನಂಬಿಕೆ ಹೊಂದಿದವರು. ಪರಶುರಾಮ ಸೃಷ್ಟಿಯ ಕ್ಷೇತ್ರದಲ್ಲಿ ಜನಿಸಿದ ಬಂಟರು ಬಾಲ್ಯದಿಂದಲೇ ಪ್ರಕೃತಿಪ್ರಿಯರಾಗಿ ನಿಸರ್ಗದ ಮಧ್ಯೆ ಬೆಳೆದು ಬಂದವರಾಗಿರುವುದರಿಂದಲೇ ಪ್ರಕೃತಿ ಮಾತೆಯನ್ನು, ಭೂಮಿ ತಾಯಿಯನ್ನು ಗೌರವದಿಂದ ಪೂಜಿಸಿಕೊಂಡು ಬಂದವರು. ಈ ನಿಟ್ಟಿನಿಂದಾಗಿಯೇ ನಾಗಾರಾಧನೆ ಕರಾವಳಿಯಾದ್ಯಂತ ಅತ್ಯಂತ ಪಾವಿತ್ರ್ಯತೆ ಪಡೆದುಕೊಂಡ ಭಕ್ತಿಯ ಆರಾಧನೆ. ಇಂದಿಗೂ ಕೂಡ “ನಾಗಮಂಡಲ” ವು ಕರಾವಳಿಯಾದ್ಯಂತ ಅತ್ಯಂತ ಪಾವಿತ್ರ್ಯತೆ ಹಾಗೂ ಭಯಭಕ್ತಿಯೊಂದಿಗೆ ಆಚರಿಸ್ಪಡುವ ಆಚರಣೆಯಾಗಿದೆ.ಸಾಹಸಿಗರಾಗಿ ಬಾಳಿ ಬದುಕಿದ ಬಂಟರು ಕರಾವಳಿ ನೆಲದ ಪಾರಂಪರಿಕ ಕಲೆ ಸಂಸ್ಕೃತಿಗಳನ್ನು ನಿರಂತರವಾಗಿ ಪೋಷಿಸಿ ಬೆಳೆಸಿಕೊಂಡು ಬಂದವರು.


ಕರಾವಳಿಯ ಗಂಡುಮೆಟ್ಟಿನ ಕಲೆ ಯಕ್ಷಗಾನವನ್ನು ಪ್ರೋತ್ಸಾಹಿಸಿ ಬೆಳೆಸಿಕೊಂಡು ಬಂದಿರುವುದರ ಜೊತೆಗೆ ಭೂತದ ಕೋಲ, ನೇಮ, ಪಾಡ್ದನಗಳಂತಹ ವಿಶಿಷ್ಠ ಪಾರಂಪರಿಕ ಸಂಪ್ರದಾಯವನ್ನು ಇಂದಿಗೂ ಕೂಡ ಮುಂದುವರಿಸಿಕೊಂಡು ಬರಲಾಗುತ್ತಿದೆ. ಭಕ್ತಿಯ ಜೊತೆ ಜೊತೆಗೆ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವುದೂ ಅಲ್ಲದೇ ಅವುಗಳನ್ನು ಇಂದಿಗೂ ಪೋಷಿಸಿ ಬೆಳೆಸಿಕೊಂಡು ಬಂದ ಕೀರ್ತಿ ಬಂಟರಿಗೆ ಸಲುತ್ತದೆ. ಇವೆಲ್ಲದರ ಜೊತೆ ಜೊತೆಗೆ ಹಬ್ಬ-ಹರಿದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಮೋಜಿಗಾಗಿ ಕೋಳಿ ಅಂಕಗಳನ್ನು ನಡೆಸಿ ಮನರಂಜನೆ ಪಡೆಯುತ್ತಿದ್ದರು.


ಸಾಮಾನ್ಯವಾಗಿ ಮಾಂಸಾಹಾರಿಗಳಾದ ಬಂಟರು ಊಟೋಪಚಾರದ ವಿಷಯದಲ್ಲಿ ಎಂದಿಗೂ ರಾಜಿಯಾಗದ ರಾಜ ಮನೆತನದವರು. ಕೋಳಿರೊಟ್ಟಿ, ನೀರ್ ದೋಸೆ, ಕಾಣೆಗಸಿ ಯಂತಹ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಮನೆಗ ಬಂದ ಅತಿಥಿಗಳನ್ನು ಸತ್ಕರಿಸುವುದರಲ್ಲಿ ಬಂಟರದು ಎತ್ತಿದ ಕೈ.

ಬಂಟರಲ್ಲಿನ ಇನ್ನೊಂದು ವೈಶಿಷ್ಟ್ಯತೆ ‘ಅಳಿಯ ಸಂತಾನ’ ಪರಂಪರೆ. ಪುರಾಣಗಳು ಸಾರುವಂತೆ ‘ಭೂತಾಳ ಪಾಂಡ್ಯ’ನ ಸೋದರಮಾವ ದೇವ ಪಾಂಡ್ಯನ ಕಾಲದಲ್ಲಿ ಘಟಿಸಿದ ಘಟನೆಯಂತೆ, ಹೊಸದಾಗಿ ನಿರ್ಮಾಣಗೊಂಡ ಸರಕು ಸಾಗಾಣಿಕೆಯ ಹಡಗು ಸಮುದ್ರ ಮಾರ್ಗದಲ್ಲಿ ಚಲಿಸುವ ಮೊದಲು ಅದರ ಸುರಕ್ಷತೆಗಾಗಿ ಸಮುದ್ರ ರಾಜನಿಗೆ ನರಬಲಿ ಕೊಡಬೇಕೆನ್ನುವ ಆಣತಿಯಂತೆ ದೇವಪಾಂಡ್ಯ ತನ್ನ

ಮಕ್ಕಳನ್ನು ಕೇಳಿದಾಗ, ಆತನ ಪತ್ನಿ ಅದಕ್ಕೊಪ್ಪಲಿಲ್ಲ. ಆತನು ನಂತರ ತನ್ನ ತಂಗಿಯ ಬಳಿ ತನ್ನ ದುಗುಡವನ್ನು ತೋಡಿಕೊಂಡಾಗ ಆಕೆ ತನ್ನ ಮಗನಾದ “ ಭೂತಾಳ ಪಾಂಡ್ಯ’ನನ್ನು ನರಬಲಿ ಕೊಡಲು ಒಪ್ಪಿ, ಆತನ ನರಬಲಿಯ ಸಂದರ್ಭದಲ್ಲಿ ಪ್ರತ್ಯಕ್ಷನಾದ ಸಮುದ್ರರಾಜ ಭೂತಾಳ ಪಾಂಡ್ಯನ ತ್ಯಾಗವನ್ನು ಮೆಚ್ಚಿ ನರಬಲಿಯು ಅನಗತ್ಯ ಎನ್ನುವಂತೆ ತಿಳಿಸುತ್ತಾನೆ. ದೇವ ಪಾಂಡ್ಯನು ತನ್ನ ಅಳಿಯನ ಬಲಿದಾನದ ತ್ಯಾಗ ಮನೋಭಾವನೆಯನ್ನು ಮೆಚ್ಚಿ ಭವಿಷ್ಯದಲ್ಲಿ ಆತನನ್ನೇ ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದನು. ಇದೇ ಪರಂಪರೆ ಮುಂದಿನ ಅಳಿಯ ಸಂತಾನಕ್ಕೆ ನಾಂದಿಯಾಯಿತು ಎನ್ನುವ ಪ್ರತೀತಿ. ಕಾನೂನು-ಕಟ್ಟಳೆಗಳ ಹೊರತಾಗಿಯೂ ಇಂದಿಗೂ ಕೂಡ ಅಳಿಯ ಸಂತಾನ ಪದ್ಧತಿಯ ಆಚರಣೆಗಳು ಅವಿಭಕ್ತ ಬಂಟ ಕುಟುಂಬಗಳಲ್ಲಿ ನಾವು ಕಾಣಬಹುದಾಗಿದೆ.

ಎಪ್ಪತ್ತರ ದಶಕದಲ್ಲಿ, ಶ್ರೀ ದೇವರಾಜ್ ಅರಸರ ಮುಖ್ಯಮಂತ್ರಿ ಆಳ್ವಿಕೆ ಕಾಲದಲ್ಲಿ ಜಾರಿಗೆ ಬಂದ “ಉಳುವವನೇ ಹೊಲದೊಡೆಯ” ಎನ್ನುವ ಭೂಮಸೂದೆ ಕಾನೂನಿನಂತೆ ಭೂಮಾಲೀಕರೆಂದೆನಿಸಿಕೊಂಡು ಪ್ರಬಲವಾಗಿ ಕೃಷಿಯನ್ನೆ ನಂಬಿ ಬದುಕುತ್ತಿದ್ದ ಬಹುತೇಕ ಇಡೀ ಸಮುದಾಯ ಇದರಿಂದ ತಲ್ಲಣಗೊಂಡಿತು. ಧೃತಿಗೆಡದ ಬಂಟ ಸಮುದಾಯ ತಮಗಾದ ಅನ್ಯಾಯವನ್ನೇ ಆಶೀರ್ವಾದವೆಂದು ಸವಾಲಾಗಿ ಸ್ವೀಕರಿಸಿ ಭವಿಷ್ಯದ ಬದುಕನ್ನರಸಿ ದೂರ-ದೂರದ ನಗರ ಪ್ರದೇಶಗಳತ್ತ ವಲಸೆ ಹೋದರು. ಒಂದೆಡೆ ೧೯೩೧ರ ವಿಜಯದಶಮಿಯಂದು. ಅತ್ತಾವರ ಬಾಲಕೃಷ್ಣ ಹೆಗ್ಡೆ ಹಾಗೂ ಮೂಲ್ಕಿ ಸುಂದರಾಂ ಶೆಟ್ಟಿಯವರ ದೂರರ್ಶಿತ್ವ ಯೋಜನೆಯ ಕನಸಿನ ಕೂಸಾದ ‘ವಿಜಯಾ ಬ್ಯಾಂಕ್’ ಆರಂಭಗೊಂಡಂದಿನಿಂದ ಬಹಳಷ್ಟು ಮಂದಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆದಿದ್ದರು. ಹಾಗಾಗಿ ಸಮಾಜದ ಉಳಿದ ವರ್ಗದ ಜನ ಮೂಲ ನೆಲೆ ಕಂಡಿದ್ದು ಹೋಟೇಲ್ ಉದ್ಯಮದ ಮುಖೇನ. ಆರಂಭದಲ್ಲಿ ಹೋಟೇಲ್ ಕಾರ್ಮಿಕರಾಗಿ ಗುರುತಿಸಿಕೊಂಡ ಬಹುತೇಕ ಮಂದಿ ತಮ್ಮ ಕಠಿಣ ಪರಿಶ್ರಮ, ಸಾಧನೆಯ ಮಹಾತ್ವಾಕಾಂಕ್ಷೆಯೊಂದಿಗೆ ಇಂದು ಪ್ರಪಂಚದಾದ್ಯಂತ ತಾರಾಹೋಟೆಲುಗಳ ಸರದಾರರೆನಿಸಿಕೊಂಡಿದ್ದಾರೆ.


ತನ್ಮೂಲಕ ಭವಿಷ್ಯದ ಬದುಕಿಗೆ ಅನಿವಾರ್ಯವಾಗಿರುವ ಶೈಕ್ಷಣಿಕ ಕ್ಷೇತ್ರದತ್ತ ಗಮನವನ್ನು ಕೇಂದ್ರೀಕರಿಸಿ ಹಲವಾರು ಶಿಕ್ಷಣ ಸಂಸ್ಥೆಗಳೂ ಸೇರಿದಂತೆ ಅತ್ಯುನ್ನತ ಶ್ರೇಣಿಯ ಇಂಜಿನಿಯರ‍್ಸ್ ಹಾಗೂ ವೈದ್ಯರು ರೂಪುಗೊಂಡರು. ಇದರ ಪ್ರತಿಫಲವೆನ್ನುವಂತೆ ಸ್ವ-ಉದ್ದಿಮೆಯೂ ಸೇರಿದಂತೆ, ಸಣ್ಣ ಕೈಗಾರಿಕೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಆಸ್ಪತ್ರೆಗಳು ರೂಪು ತಳೆದವು.



ಬಂಟರು ತಮ್ಮ ಧಾನ-ಧರ್ಮ, ತ್ಯಾಗ, ಪರೋಪಕಾರ, ನಿಷ್ಠೆ, ವಿಶ್ವಾಸಾರ್ಹತೆ ಹಾಗೂ ಸವಾಲುಗಳನ್ನು ಸ್ವೀಕರಿಸುವ ಎದೆಗಾರಿಕೆಯ ಸಾಹಸಿ ನಾಯಕತ್ವದಿಂದಾಗಿ ಇಂದು ಪ್ರಪಂಚದ ಎಲ್ಲಾ ಭಾಗಗಳಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿನ ಪ್ರಮುಖ ಹುದ್ದೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಸಕ್ತ ರಾಜಕೀಯ ಕ್ಷೇತ್ರವೊಂದನ್ನು ಹೊರತುಪಡಿಸಿದರೆ ‘ಆಡುಮುಟ್ಟದ ಸೊಪ್ಪಿಲ್ಲ - ಬಂಟರು ತುತ್ತ ತುದಿಗೇರದ ಸಾಧನೆಯ ಕ್ಷೇತ್ರಗಳಿಲ್ಲ” ಎಂದರೆ ಅತಿಶಯೋಕ್ತಿಯಾಗಲಾರದು. ಇದರೊಂದಿಗೆ ಇಂದಿನ ಯುವ ಸಮುದಾಯ ಪ್ರಸಕ್ತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕ್ಷೇತ್ರಗಳೆರಡನ್ನೇ ಗುರಿಯಾಗಿರಿಸಿಕೊಳ್ಳದೇ, ಆಡಳಿತಾತ್ಮಕ ಸೇವೆ (IAS) ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರ (IPS) ಗಳತ್ತಲೂ ಗಮನಹರಿಸಿ ಭವ್ಯಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.

ಭಗವಾನ್ ಪರಶುರಾಮರ ಬೇಡಿಕೆಗೆ ಸಮುದ್ರರಾಜ ಬಿಟ್ಟುಕೊಟ್ಟ ಪವಿತ್ರ ನೆಲ, ಮಹಾನ್ ದಾರ್ಶನಿಕ ಶ್ರೀ ಮಧ್ವಾಚಾರ್ಯರ ಅವತಾರ ಭೂಮಿ, ಸತ್ಯ-ಧರ್ಮಗಳ ಪ್ರತಿ ಸ್ವರೂಪದಂತೆ ಬಾಳಿದ ಕೋಟಿ-ಚೆನ್ನಯರಂತಹ ವೀರ ಪುರುಷರ ಕರ್ಮಭೂಮಿ, ವಿಭೂತಿ ಪುರುಷ ಶ್ರೀವಾದಿರಾಜರು, ಭಕ್ತ ಕನಕರೇ ಮೊದಲಾದ ಹರಿದಾಸವರೇಣ್ಯರು ಶ್ರೀ ಹರಿಯನ್ನು ಹಾಡಿ ಕೊಂಡಾಡಿ ನಲಿದ ನೆಲ, ಅಗೋಳಿ ಮಂಜಣ್ಣನ ಆಡುಂಬೊಲ, ವೀರರಾಣಿ ಅಬ್ಬಕ್ಕನ ಕ್ಷಾತ್ರಾಂಗಣ, ದೌರ್ಜ್ಯನದ ವಿರುದ್ಧದ ಧ್ವನಿಯಾದ ತುಳುನಾಡ ಸಿರಿ ಮೆರೆದ ತಾಣ, ಬಾರಕೂರು, ಬಸ್ರೂರೆಂಬ ಅರಸೊತ್ತಿಗೆ, ಮೂಡಬಿದಿರೆಯೆಂಬ ಬಸದಿಯ ಬೀಡು, ಕಾರ್ಕಳ ವೇಣೂರಿನ ಬಾಹುಬಲಿ, ಅರುಣಾಬ್ಜ, ವಿಷ್ಣುತುಂಗ, ರತ್ನಾಕರ ವರ್ಣಿ, ಮುದ್ದಣ, ಪಂಜೆ ಮಂಗೇಶರಾಯ, ಗೋವಿಂದ ಪೈ, ಕಡಂಗೊಡ್ಲು ಶಂಕರ್ ಭಟ್ಟ, ಕಡಲ ತೀರದ ಭಾರ್ಗವ ಕಾರಂತರ, ಗಡಿನಾಡ ಗಾಂಧಿ ಕಯ್ಯಾರ ಕಿಂಜ್ಞಣ್ಣ ರೈ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಅಪ್ರತಿಮ ವಾಗ್ಮಿ ಶ್ರೀ ಎನ್.ಎಸ್. ಕಿಲ್ಲೆಯವರ ಹುಟ್ಟೂರು, ಪಾಡ್ದನದಂತಹ ಅಪೂರ್ವ ಪದಲಾಲಿತ್ಯವುಳ್ಳ ಕಾವ್ಯದ ಕಣಜ, ನಾಗಾರಾಧನೆ, ದೈವ-ಭೂತಾರಾಧನೆಯಂತಹ ವಿಶಿಷ್ಠ ಅರಾಧನಾ ಪ್ರಕಾರಗಳು, ಯಕ್ಷಗಾನದಂತಹ ಸರ್ವಾಂಗ ಸುಂದರ ಕಲೆಗಳ ಜನ್ಮತಾಣ. ಕಂಬಳದಂತಹ ವಿಶಿಷ್ಠ ಜಾನಪದ ಕ್ರೀಡೆಯ ತವರು, ಧರ್ಮದ ತಳಹದಿಯಲ್ಲಿ ನ್ಯಾಯ ಒದಗಿಸುವ ಧರ್ಮಸ್ಥಳ, ನಾಗಾರಾಧನೆಗೆ ಪ್ರಶಸ್ತವೆನಿಸಿ ಬೆಳೆದು ನಿಂತ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಅನ್ನಬ್ರಹ್ಮನ ಉಡುಪಿ, ಕಟೀಲು ಹಾಗೂ ಮಂದಾರ್ತಿಯ ದುರ್ಗಾಪರಮೇಶ್ವರಿ, ಆನೆಗುಡ್ಡೆ ವಿನಾಯಕ ಸನ್ನಿಧಿ, ಕೊಲ್ಲೂರಿನ ಮೂಕಾಂಬಿಕೆ, ಮುರ್ಡೇಶ್ವರದ ಮುರುಡೇಶ್ವರ, ಅತ್ತೂರಿನ ಇಗರ್ಜಿ, ಉಳ್ಳಾಲದ ದರ್ಗಾ ಸೇರಿದಂತೆ ಸಾವಿರಾರು ಪುಣ್ಯಧಾಮಗಳು, ಪಶ್ಚಿಮದ ಕಡಲತೀರ, ಪಶ್ಚಿಮಘಟ್ಟದ ಪರ್ವತಗಳ ಸಾಲು ಮೊದಲಾದ ವಿಹಂಗಮಗಳು, ಶಂಕರಪುರದ ಮಲ್ಲಿಗೆಯ ಕಂಪು, ತೆಂಗು-ಕಂಗು, ಮಾವು-ಬೇವುಗಳ ಸಮೃದ್ಧ ಪರಿಸರದ ತಂಪು, ರಾಷ್ಟ್ರದ ಪ್ರಮುಖ ೫ ಬ್ಯಾಂಕುಗಳ ತವರೂರು, ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ನೆಲ-ಜಲ-ವಾಯು ಮೂರು ವಿಧದ ಸಾರಿಗೆಯ ಕೆಂದ್ರವಾಗಿ, ನೂರಾರು ವೈಶಿಷ್ಟ್ಯಪೂರ್ಣ ಹೆಗ್ಗಳಿಕೆಯನ್ನು ಹೊಂದಿರುವ ಕರಾವಳಿಯ ನಾಡು ‘ಹೆಮ್ಮೆಯ ಬಂಟರ ಮೂಲ ನೆಲೆವೀಡು’.